Asianet Suvarna News Asianet Suvarna News

ಮತ್ತೆ ಮತ್ತೆ ಕಾಳಿದಾಸ, ಮೇಘದೂತವೆಂಬ ಎಲ್ಲೆ ಮೀರಿದ ವಿರಹದ ಧ್ಯಾನದಲ್ಲಿ

ಪ್ರೇಮ ಸಿದ್ಧಾಂತ ಮತ್ತು ವಿರಹ ಸಿದ್ಧಾಂತವನ್ನು ಕಾಳಿದಾಸನಷ್ಟು ದೈವಿಧ್ಯಮಯವಾಗಿ ಕಟ್ಟಿಕೊಟ್ಟ ಕವಿ ಇನ್ನೊಬ್ಬ ಇರಲಿಕ್ಕಿಲ್ಲ. ಒಂದೊಂದು ಸಾಲೂ ಕೋಟೆಬಲ್ ಕೋಟ್ ರೀತಿಯಲ್ಲಿರುತ್ತವೆ. ಆ ಕಾರಣಕ್ಕಾಗಿಯೇ ಇವತ್ತಿಗೂ ಸಾಹಿತ್ಯಾಸಕ್ತರು ಮತ್ತೆ ಮತ್ತೆ ಕಾಳಿದಾಸನತ್ತ ತಿರುಗಿ ನೋಡುತ್ತಾರೆ. ಅವರಿಗೆ ಮೋಸವಾಗುವುದಿಲ್ಲ.

Again and again Kalidasa, meditating on the transcendental wonder called Meghaduta Vin
Author
First Published May 5, 2024, 1:36 PM IST

- ಮಹಾಬಲ ಸೀತಾಳಭಾವಿ

ಪ್ರೇಮ ಸಿದ್ಧಾಂತ ಮತ್ತು ವಿರಹ ಸಿದ್ಧಾಂತವನ್ನು ಕಾಳಿದಾಸನಷ್ಟು ವೈವಿಧ್ಯಮಯವಾಗಿ ಕಟ್ಟಿಕೊಟ್ಟ ಕವಿ ಇನ್ನೊಬ್ಬ ಇರಲಿಕ್ಕಿಲ್ಲ. ಅವನ ಕಾವ್ಯ ಹಾಗೂ ನಾಟಕಗಳ ಒಂದೊಂದು ಸಾಲೂ ಕೋಟೆಬಲ್ ಕೋಟ್ಸ್ ರೀತಿಯಲ್ಲಿರುತ್ತವೆ. ಆ ಕಾರಣಕ್ಕಾಗಿಯೇ ಇವತ್ತಿಗೂ ಸಾಹಿತ್ಯಾಸಕ್ತರು ಮತ್ತೆ ಮತ್ತೆ ಕಾಳಿದಾಸನತ್ತ ತಿರುಗಿ ನೋಡುತ್ತಾರೆ. ಅವರಿಗೆ ಮೋಸವಾಗುವುದಿಲ್ಲ.ಕಾಳಿದಾಸನನ್ನು ಓದುವುದು ಒಂದು ಖುಷಿಯಾದರೆ, ಅನುವಾದ ಮಾಡುವುದು ಇನ್ನೊಂದೇ ಖುಷಿ. ಹತ್ತು ವರ್ಷಗಳ ಹಿಂದೆ ‘ಅಭಿಜ್ಞಾನ ಶಾಕುಂತಲ’ವನ್ನು ಅನುವಾದ ಮಾಡುವಾಗ ಅದನ್ನು ಮೊದಲ ಬಾರಿ ಅನುಭವಿಸಿದ್ದೆ.

 ಈಗ ‘ಮೇಘದೂತ’.ಹಿಮಾಲಯದ ಅಲಕಾನಗರಿಯ ರಾಜ ಕುಬೇರ. ಅವನ ಸೇವೆಗೆ ಅಸಂಖ್ಯ ಗಂಧರ್ವರಿದ್ದಾರೆ. ಒಬ್ಬ ಗಂಧರ್ವ ಅದೇನೋ ತಪ್ಪು ಮಾಡಿ ಕುಬೇರನನ್ನು ಸಿಟ್ಟಿಗೇಳಿಸಿದ್ದಾನೆ. ಅದಕ್ಕಾಗಿ ಅವನಿಗೆ ಒಂದು ವರ್ಷವನ್ನು ಕಾಡಿನಲ್ಲಿ ಕಳೆಯುವಂತೆ ಕುಬೇರ ಶಾಪ ನೀಡಿ ಚಿತ್ರಕೂಟ ಪರ್ವತಕ್ಕೆ ಕಳುಹಿಸಿದ್ದಾನೆ. 

ಪತ್ರಕರ್ತನ ಡೈರಿ; ಪದ್ಮರಾಜ ದಂಡಾವತಿಯವರ ನೆನಪಿನ ಪುಟಗಳು

ಅವನು ಆಗಷ್ಟೇ ಮದುವೆಯಾಗಿದ್ದ ಗಂಧರ್ವ. ಶಾಪದಿಂದಾಗಿ ಗಂಧರ್ವತ್ವವನ್ನು ಕಳೆದುಕೊಂಡು ಕಾಡಿಗೆ ಹೋಗಿ ಎಂಟು ತಿಂಗಳನ್ನು ಮನುಷ್ಯನಂತೆ ಕಳೆದಿದ್ದಾನೆ. ಶಾಪ ಮುಗಿಯಲು ಇನ್ನೂ ನಾಲ್ಕು ತಿಂಗಳಿದೆ. ಪತ್ನಿಯ ವಿರಹ ತೀವ್ರವಾಗಿ ಬಾಧಿಸುತ್ತಿದೆ. ಅವಳೂ ಅಷ್ಟೇ ಸಂಕಷ್ಟದಲ್ಲಿದ್ದಾಳೆಂಬುದೂ ಅವನಿಗೆ ಗೊತ್ತಿದೆ. ಹೇಗಾದರೂ ಮಾಡಿ ತಾನು ಬದುಕಿರುವ ವಾರ್ತೆಯನ್ನು ಅವಳಿಗೆ ತಿಳಿಸಬೇಕಲ್ಲ? ಅಷ್ಟೊತ್ತಿಗೆ ಮಳೆಗಾಲದ ಮೋಡ ಆಗಸದಲ್ಲಿ ಕಾಣಿಸಿಕೊಂಡಿದೆ. ತನ್ನ ಸಂದೇಶವನ್ನು ಪತ್ನಿಗೆ ಕಳುಹಿಸಲು ಈ ಮೋಡವೇ ಸರಿ ಎಂದು ಅವನಿಗೆ ಅನ್ನಿಸಿದೆ. 

ವಿರಹದಿಂದ ಉನ್ಮತ್ತರಾದವರಿಗೆ ಜೀವವಿರುವ ಮತ್ತು ಜೀವವಿಲ್ಲದ ವಸ್ತುಗಳಲ್ಲಿ ವ್ಯತ್ಯಾಸವೆಲ್ಲಿ?ಆ ಮೋಡಕ್ಕೆ ಶಾಪಗ್ರಸ್ತ ಗಂಧರ್ವನು ತನ್ನ ಪ್ರೇಯಸಿಗೆ ತಿಳಿಸುವಂತೆ ಕಾಡು ಹೂವುಗಳನ್ನು ಬೊಗಸೆಯಲ್ಲಿಟ್ಟುಕೊಂಡು ಮಂಡಿಯೂರಿ ಕುಳಿತು ಅರುಹುವ ಸಂದೇಶವೇ ಜಗತ್ಪ್ರಸಿದ್ಧ ‘ಮೇಘದೂತ’ ಖಂಡಕಾವ್ಯದ ಪೂರ್ವಮೇಘ ಮತ್ತು ಉತ್ತರಮೇಘವೆಂಬ ಎರಡು ವಿಭಾಗಗಳ ನೂರಿಪ್ಪತ್ತೊಂದು ಶ್ಲೋಕಗಳಲ್ಲಿ ಇರುವ ರಸಪಾಕ.ಮೇಘದೂತ ಕಾವ್ಯದ ಹಿರಿಮೆಯನ್ನು ಹೇಳುವಾಗ 1500 ವರ್ಷಗಳ ಹಿಂದೆಯೇ ಕಾಳಿದಾಸ ಮಧ್ಯಪ್ರದೇಶದ ಚಿತ್ರಕೂಟ ಪರ್ವತದಿಂದ ನೇಪಾಳದ ಕೈಲಾಸ ಪರ್ವತದವರೆಗಿನ ಸುಮಾರು 700 ಕಿಲೋಮೀಟರ್ ದೂರದ ದಾರಿಯನ್ನು ಎಷ್ಟು ಕರಾರುವಾಕ್ಕಾಗಿ ಹೇಳಿದ್ದಾನೆಂದು ಹುಬ್ಬೇರಿಸುವುದು ವಾಡಿಕೆ. 

ಅದೂ ಒಂದು ಅದ್ಭುತ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಮೇಘದೂತದ ಹಿರಿಮೆಯಿರುವುದು ಒಬ್ಬ ಮುಗ್ಧ ಪ್ರಾಮಾಣಿಕ ಪ್ರೇಮಿಯ ವಿರಹದ ತುರೀಯಾವಸ್ಥೆಯನ್ನು ಹಿಂದೆಯೂ ಮುಂದೆಯೂ ಯಾರೂ ಚಿತ್ರಿಸಿರದ ರೀತಿಯಲ್ಲಿ ಒಬ್ಬ ಮನಃಶಾಸ್ತ್ರಜ್ಞನಂತಹ ಕವಿಯಾಗಿ ಕಾಳಿದಾಸ ಚಿತ್ರಿಸಿರುವುದರಲ್ಲಿ. ವಿರಹಿ ಹೇಗೆ ಅರೆಹುಚ್ಚನೂ ಆಗಿರುತ್ತಾನೆಂಬುದನ್ನು ಯಕ್ಷನ ಮರ್ಯಾದೆಯನ್ನು ಕಳೆಯದೆಯೇ ಕಾಳಿದಾಸ ಬಣ್ಣಿಸಿರುವ ರೀತಿ ಅನನ್ಯವಾಗಿದೆ.ಮೊದಲಿಗೆ ಗಂಧರ್ವ ತನ್ನ ಪತ್ನಿಯನ್ನು ನೋಡದೆ ಎಂಥಾ ದುಸ್ಥಿತಿಗೆ ತಲುಪಿದ್ದಾನೆಂದು ಕಾಳಿದಾಸ ಹೇಳುತ್ತಾನೆ. 

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ನಂತರ ಮೋಡವನ್ನೇಕೆ ಅವನು ಸಂದೇಶ ಕಳುಹಿಸಲು ಆಯ್ಕೆ ಮಾಡಿಕೊಂಡ ಎಂಬುದನ್ನು ತಿಳಿಸುತ್ತಾನೆ. ಬಳಿಕ ಯಕ್ಷನು ಮೋಡಕ್ಕೆ ನೀನೆಷ್ಟು ಶ್ರೇಷ್ಠ, ಏಕೆ ನೀನು ನನ್ನ ಸಂದೇಶವನ್ನು ಪ್ರಿಯತಮೆಗೆ ತಲುಪಿಸಬೇಕು, ಏಕೆ ಇದೊಂದು ಮಹತ್ಕಾರ್ಯ ಎಂಬುದನ್ನು ಹೇಳುತ್ತಾನೆ. ನಂತರ ಸಾಗಬೇಕಾದ ದಾರಿಯನ್ನು ತಿಳಿಸುತ್ತಾನೆ. ಮೊದಲಿಗೆ ಸಿಗುವ ಕಾಡು, ನದಿ, ನಂತರ ಸಿಗುವ ಉಜ್ಜಯಿನಿ ನಗರ, ಅಲ್ಲಿನ ಜನಜೀವನ, ನಂತರ ಸಿಗುವ ಗಿರಿ ಪರ್ವತಗಳು, ಅವುಗಳ ಶ್ರೇಷ್ಠತೆ, ದಾರಿಯ ಹವಾಮಾನ, ಮತ್ತೆ ಸಿಗುವ ತೊರೆಗಳು, ನಂತರ ಸಿಗುವ ಅಲಕಾನಗರಿ, ಅಲ್ಲಿನ ವೈಭೋಗ, ಇವುಗಳನ್ನು ಬಣ್ಣಿಸುವಾಗ ಕಾವ್ಯದುದ್ದಕ್ಕೂ ಪ್ರೇಮ ಮತ್ತು ವಿರಹದ ಸ್ಥಾಯಿಭಾವ... 

ಇದು ಮೇಘದೂತದ ಪಕ್ಷಿನೋಟ.ಈಗಾಗಲೇ ಸಾಕಷ್ಟು ಅನುವಾದಗಳು ಬಂದಿರುವಾಗ ಮೇಘದೂತವನ್ನು ಮತ್ತೆ ಮತ್ತೆ ಅನುವಾದಿಸುವ ಅಗತ್ಯವೇನಿದೆ? ರಾಮಾಯಣ ಮತ್ತು ಮಹಾಭಾರತವನ್ನು ಏಕೆ ನಾವು ಮತ್ತೆ ಮತ್ತೆ ಹೊಸತಾಗಿ ಕೃತಿಗಿಳಿಸುತ್ತೇವೆ ಎಂಬ ಪ್ರಶ್ನೆಗೆ ಏನು ಉತ್ತರವೋ ಇದಕ್ಕೂ ಅದೇ ಉತ್ತರ. ಹೊಸ ಹೊಸ ಅನುವಾದಗಳು ಬಂದಾಗ ಕೆಲವರಾದರೂ ಹೊಸತಾಗಿ ಅದನ್ನು ಓದುತ್ತಾರೆ. ಅಷ್ಟರಮಟ್ಟಿಗೆ ಅದು ಸಾರ್ಥಕ. ಹೊಸ ಅನುವಾದದಲ್ಲಿ ನಮಗೆ ಗೊತ್ತಿಲ್ಲದೆಯೇ ಮೂಲಕ್ಕೆ ಹೊಸ ವ್ಯಾಖ್ಯಾನಗಳು ಸೇರಿಕೊಳ್ಳುತ್ತವೆ. ಅದು ಮೂಲದ ಸಾಧ್ಯತೆಯನ್ನು ವಿಸ್ತರಿಸುತ್ತದೆ. ಅದು ಇನ್ನೊಂದು ಲಾಭ. ಮೂರನೆಯದಾಗಿ, ಸಂಸ್ಕೃತದ ಕಾವ್ಯಗಳನ್ನು ಸಂಸ್ಕೃತ ಓದಿಲ್ಲದವರು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಆದರೆ, ಅವುಗಳ ಬಹುತೇಕ ಅನುವಾದಗಳು ಹಳೆಗನ್ನಡದಲ್ಲಿವೆ ಅಥವಾ ಹೊಸಗನ್ನಡದ ಕಾವ್ಯದಲ್ಲಿವೆ. 

ಅದು ಈಗಿನ ಓದುಗರಿಗೆ ಇನ್ನೊಂದು ಕಷ್ಟ. ಹೀಗಾಗಿ ಒಂದು ಸರಳ ಅನುವಾದ ಲಭ್ಯವಿದ್ದರೆ ಅದು ಕಾಳಿದಾಸನನ್ನು ಇನ್ನೊಂದು ಪೀಳಿಗೆಯ ಕೆಲವೇ ಕೆಲವರಿಗೆ ದಾಟಿಸುವ ಕೆಲಸವನ್ನು ಮಾಡಿದರೂ ಸರಿ, ಅದು ಸ್ವಾಗತಾರ್ಹ.ಕಾಳಿದಾಸ ಮೇಲ್ನೋಟಕ್ಕಷ್ಟೇ ಸರಳ ಕವಿ. ಆದರೆ ಅನುವಾದಕ್ಕೆ ಕುಳಿತರೆ ಅವನ ಅಗಾಧತೆಯ ದರ್ಶನವಾಗುತ್ತದೆ. ಅವನ ಉಪಮಾಲೋಲುಪತೆ ಮತ್ತು ಶ್ಲೇಷಪ್ರಿಯತೆಯು ಅನುವಾದಕರನ್ನು ಗೊಂದಲಕ್ಕೆ ಬೀಳಿಸುವುದುಂಟು. ಹಾಗೆ ಗೊಂದಲವಾದಾಗಲೆಲ್ಲ ನಮಗೆ ಏಕೈಕ ಆಶ್ರಯ ಮಲ್ಲಿನಾಥ. 

ಕಾಳಿದಾಸನ ಬಹುತೇಕ ಎಲ್ಲಾ ಕೃತಿಗಳಿಗೂ ಅದ್ಭುತವಾದ ‘ಸಂಜೀವನಿ’ ವ್ಯಾಖ್ಯಾನವನ್ನು ಬರೆದ ಮಹಾಮಹೋಪಾಧ್ಯಾಯ ಮಲ್ಲಿನಾಥ ಸೂರಿ ಕಾಳಿದಾಸನ ಓದುಗರಿಗೆ ಮಹದುಪಕಾರವನ್ನು ಮಾಡಿದ್ದಾನೆ. ವ್ಯಾಕರಣ ಬದ್ಧವಾಗಿ ಕಾಳಿದಾಸನನ್ನು ಸುಲಭವಾಗಿ ಓದುಗರಿಗೆ ಅರ್ಥ ಮಾಡಿಸಿದ ಕೀರ್ತಿ ಮಲ್ಲಿನಾಥನಿಗೇ ಸಲ್ಲುತ್ತದೆ. ಕಾಳಿದಾಸ ಮಾಡಿರಬಹುದಾದ ವ್ಯಾಕರಣದ ತಪ್ಪು ಪ್ರಯೋಗಗಳನ್ನು ಅಥವಾ ಕಾಳಿದಾಸನ ಪದಪ್ರಯೋಗಗಳಲ್ಲಿ ಅಲ್ಲಲ್ಲಿ ಕಾಣಿಸುವ ಗೊಂದಲಗಳನ್ನು ಬಗೆಹರಿಸಿದ ಕೀರ್ತಿಯೂ ಅವನದೇ ಆಗಿದೆ. 

ಆದರೆ, ಮಲ್ಲಿನಾಥನ ವ್ಯಾಖ್ಯಾನವೂ ಸಾಮಾನ್ಯ ಸಾಹಿತ್ಯಾಸಕ್ತರಿಗೆ ಸುಲಭವಿಲ್ಲ. ಅದನ್ನು ಸರಳೀಕರಿಸಿ, ಸಂಕ್ಷಿಪ್ತಗೊಳಿಸಿದ ಅನುವಾದವೊಂದರ ಅಗತ್ಯವಿತ್ತು.ಪ್ರತಿ ಓದು, ಪ್ರತಿ ಅನುವಾದ, ಪ್ರತಿ ಪಾಠ ಹಾಗೂ ಪ್ರತಿ ಚರ್ಚೆಯಲ್ಲೂ ಕಾಳಿದಾಸ ಹೊಸ ಹೊಳಹುಗಳನ್ನು ಹುಟ್ಟಿಸುತ್ತಾನೆ. ಇದು ಶೇಕ್ಸ್‌ಪಿಯರ್‌ನಿಂದ ಹಿಡಿದು ಜಗತ್ತಿನ ಎಲ್ಲ ಸಾರ್ವಕಾಲಿಕ ಶ್ರೇಷ್ಠ ಬರಹಗಾರರ ವಿಷಯದಲ್ಲೂ ನಿಜ. ‘ಮೇಘದೂತ’ವೆಂಬ ಅನನ್ಯ ಕೃತಿಗೆ ಅಂತಹದ್ದೊಂದು ಹೊಸತಾದ ಮತ್ತು ಸುಲಭವಾದ ಕನ್ನಡಾನುವಾದ ಬಂದಿದೆ.ಯಕ್ಷನ ವಿರಹವನ್ನು ಪುನಃ ಪುನಃ ಧ್ಯಾನಿಸಿ ಉತ್ಕಟ ಪ್ರೇಮಿಗಳಾಗುವ ಸುಖ ನಮ್ಮದಾಗಲಿ.

*

*ಮಹಾಬಲ ಸೀತಾಳಭಾವಿ ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿರುವ ಅಂಕಿತ ಪುಸ್ತಕದ ‘ಮೇಘದೂತ’ ಇಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಬಿಡುಗಡೆಯಾಗಲಿದೆ

Follow Us:
Download App:
  • android
  • ios